ರಾಜಮಹಲ್		
ಭಾರತದ ಬಿಹಾರ್ ರಾಜ್ಯದ ಸಂತಾಲ್‍ಪರಗಣ ಜಿಲ್ಲೆಯ ಒಂದು ಐತಿಹಾಸಿಕ ಪ್ರಸಿದ್ಧ  ಪಟ್ಟಣ. ಭಾಗಲ್‍ಪುರಕ್ಕೆ ಆಗ್ನೇಯದಲ್ಲಿ 89ಕಿಮೀ. ದೂರದಲ್ಲಿ ಗಂಗಾನದಿಯ ಬಲದಂಡೆಯ ಮೇಲಿದೆ.  ಹಿಂದೆ ಇದು ಬಂಗಾಲದ ರಾಜಧಾನಿಯಾಗಿತ್ತೆಂದು ತಿಳಿದುಬರುತ್ತದೆ. 1595-96ರಲ್ಲಿ ಅಕ್ಬರನ ಪ್ರಾಂತ್ಯಾಧಿಕಾರಿಯಾಗಿ ಇಲ್ಲಿಗೆ ಬಂದ ಮಾನ್‍ಸಿಂಗ್ ಈ ಸ್ಥಳವನ್ನು ತನ್ನ ರಾಜಧಾನಿಯನ್ನಾಗಿ ಆಯ್ಕೆಮಾಡಿದನಾದರೂ 1608ರಲ್ಲಿ ರಾಜ್ಯಾಡಳಿತ ಢಾಕಕ್ಕೆ ವರ್ಗವಾಯಿತು.  ದೊರೆ ಷಹಷೂಜ ಎಂಬುವನು 1639ರಲ್ಲಿ ಇದನ್ನು ಮತ್ತೆ ರಾಜಧಾನಿಯನ್ನಾಗಿ ಮಾಡಿಕೊಂಡ. ಭಾರತದ ಪೂರ್ವ ರೈಲುಮಾರ್ಗ ಈ ಪಟ್ಟಣದ ಮೂಲಕ ಮುಂದುವರೆದಿದೆ. ಇದರ ಜೊತೆಗೆ ಮುಖ್ಯ ರಸ್ತೆ  ಸಂಪರ್ಕವೂ ಈ ಪಟ್ಟಣಕ್ಕೆ ಇದೆ. 

ಇಲ್ಲಿ ಕೆಲವು ಐತಿಹಾಸಿಕ ಕಟ್ಟಡಗಳಿವೆ. ಇವುಗಳಲ್ಲಿ ಸು. 1600ರಲ್ಲಿ ನಿರ್ಮಿಸಿರುವ ಅಕ್ಬರ್ ಮಸೀದಿ, 18ನೆಯ ಶತಮಾನದ ಬಂಗಾಲದ ನವಾಬ ಮೀರ್ ಖಾಸಿಂನ ಅರಮನೆ ಮುಂತಾದವುಗಳಿವೆ. ಇಲ್ಲಿನ ರಾಜ್‍ಮಹಲ್ ಬೆಟ್ಟಶ್ರೇಣಿ ಉತ್ತರದಿಂದ ದಕ್ಷಿಣದ ದುಮ್ಕಾ ವರೆಗೆ ಸು. 190 ಕಿಮೀ. ದೂರ ಹರಡಿದ್ದು 3538 ಚಕಿಮೀ ವ್ಯಾಪ್ತಿ ಪಡೆದಿದೆ. ಇಲ್ಲಿನ ಶಿಖರ 567 ಮೀ ಎತ್ತರದ ವರೆಗೆ ತಲೆ ಎತ್ತಿದೆ.  ಈ ಬೆಟ್ಟಗಳ ಮೇಲೆ ಸೌರಿಯ ಷಹಾರಿಯಾಸ್ ಜನರೂ ಬೆಟ್ಟಗಳ ಕಣಿವೆಗಳಲ್ಲಿ ಸಂತಾಲರೂ ಇದ್ದಾರೆ.  ಭಾರತದ ಸ್ವಾತಂತ್ರ್ಯ ಯುದ್ಧದಲ್ಲೂ ರಾಜ್‍ಮಹಲ್‍ನ ಗುಡ್ಡಗಾಡಿನ ಜನರು ಲಕ್ಷ್ಮೀಪುರದ ಜಗನ್ನಾಥ ದೇವನ ಪ್ರೋತ್ಸಾಹದಿಂದ ಬ್ರಿಟಿಷರ  ವಿರುದ್ಧದಂಗೆಯೆದ್ದರು.  ಬ್ರಿಟಿಷರು ಬಲು ಕಷ್ಟಪಟ್ಟು ಈ ದಂಗೆಯನ್ನು  ಅಡಗಿಸಿದರು. ಮುಂದೆ ಬ್ರಿಟಿಷ್ ಆಡಳಿತಾಧಿಕಾರಿಗಳ ಸುಲಿಗೆಯಿಂದ ಬೇಸತ್ತರಾಜ್‍ಮಹಲ್‍ನ ಗುಡ್ಡಗಾಡಿನ ಜನರೂ ಸಂತಾಲರೂ 1855ರಲ್ಲಿ ದಂಗೆ ಎದ್ದರು. ಈ ದಂಗೆಯ ಪರಿಣಾಮವಾಗಿ ಸಂತಾಲ ಪರಗಣ ಎಂಬ ಆಡಳಿತ ವಿಭಾಗ ಅಸ್ತಿತ್ವಕ್ಕೆ ಬಂತು.

ರಾಜ್‍ಮಹಲ್ ಶಿಲಾಶ್ರೇಣಿಗಳು: ಗೊಂಡ್ವಾನಯುಗದ ಉತ್ತರಾರ್ಧದಲ್ಲಿ ಸಂಚಯನಗೊಂಡ ಒಂದು ಮುಖ್ಯ ವಿಭಾಗ. ಭಾರತದ ಪಶ್ಚಿಮ ಬಂಗಾಲ ಮತ್ತು ಬಿಹಾರ್ ಪ್ರಾಂತ್ಯಗಳಲ್ಲಿಯ ಬೆಟ್ಟಗಳಲ್ಲಿ ಈ ಶ್ರೇಣಿಗಳು ಚೆನ್ನಾಗಿ ಹೊರಕಾಣುವುದರಿಂದ ಇವನ್ನು ರಾಜ್‍ಮಹಲ್ ಶ್ರೇಣಿಗಳೆಂದು ಕರೆಯಲಾಗಿದೆ. ಇವು ಗೊಂಡ್ವಾನ ಶಿಲಾಸಮುದಾಯದ ಉತ್ತರಾರ್ಧಕ್ಕೆ  ಸೇರಿದ ಮಹದೇವ ಶಿಲಾಶ್ರೇಣಿ ಮತ್ತು ಜಬ್ಬಲ್‍ಪುರ್ ಶಿಲಾ ಶ್ರೇಣಿಗಳ ನಡುವಣ ಕಾಲದವೆಂದು ತಿಳಿದುಬಂದಿದೆ. 

ರಾಜ್‍ಮಹಲ್ ಶಿಳಾ ಶ್ರೇಣಿಗಳನ್ನು ಎರಡು ಹಂತಗಳನ್ನಾಗಿ ವಿಂಗಡಿಸಲಾಗಿದೆ. ರಾಜ್‍ಮಹಲ್ ಹಂತ ಮತ್ತು ಕೋಟಾ ಹಂತ. ಕೆಳಗಣ ರಾಜ್‍ಮಹಲ್ ಹಂತದ ಸ್ತರಗಳ ದಪ್ಪ ಸುಮಾರು 600 ಮೀ. ಇವು ರಾಜ್‍ಮಹಲ್ ಟ್ರ್ಯಾಪ್‍ಶಿಲೆಗಳನ್ನೂ ಅವುಗಳೊಡನೆ ಅಂತರಪದರಗಳಾಗಿ ಜೇಡು ಶಿಲೆಗಳನ್ನೂ ಒಳಗೊಂಡಿವೆ. ಸಸ್ಯಾವಶೇಷಗಳನ್ನು ಒಳಗೊಂಡ ಈ ಅಂತರಪದರಗಳು ಒಂದೊಂದೂ 2_6 ಮೀಗಳಷ್ಟು ದಪ್ಪ ಇವೆ.  ಟ್ರ್ಯಾಪ್‍ಶಿಲೆಗಳ  ಮಧ್ಯದಲ್ಲಿ ಸಸ್ಯಾವೇಷಗಳನ್ನು  ಒಳಗೊಂಡ ಸ್ತರಗಳು ಕಂಡುಬರುವುದರಿಂದ  ಎರಡು ಟ್ರ್ಯಾಪ್ ಶಿಲಾಸ್ರಾವಗಳ ನಡುವಣ ಕಾಲದಲ್ಲಿ ಈ ಸ್ತರಗಳು ಶೇಖರವಾಗಿವೆಯೆಂದು ಭಾವಿಸಲಾಗಿದೆ.  ಸಾಮಾನ್ಯವಾಗಿ ಇವುಗಳಲ್ಲಿಯ ಜೇಡುಶಿಲೆಗಳು ಸಿಲಿಕಯುಕ್ತವಾಗಿವೆ. ಈ ಪದರಗಳಲ್ಲಿ ವಿವಿಧ ವರ್ಗಕ್ಕೆ ಸೇರಿದ ಸಸ್ಯಾವೇಷಗಳು ಹೇರಳವಾಗಿ ಕಂಡುಬಂದಿವೆ. ಅವುಗಳಲ್ಲಿ ಸೈಕಾಡ್ ವರ್ಗ ಅಧಿಕ. ಫರ್ನ್, ಕೋನಿಫೆರಸ್ ಮುಂತಾದವೂ ವಿಶೇಷವಾಗಿವೆ. ಟೈಲೊಫಿಲಮ್ ಡಿಕ್ಟಿಯೋಜಮೈಟಿಸ್, ವಿಲಿಯಮ್‍ಸೋನಿಯ, ಕ್ಲ್ಯಾಡೋಫ್ಲೆಬಿಸ್, ಎಲ್ಯಾಟೊಕ್ಲಾಡಸ್ ಮುಂತಾದ ಜಾತಿಗಳಗೆ ಸೇರಿದ ಸಸ್ಯಾವಷೇಶಗಳನ್ನೂ ಅನೇಕ ಮರಶಿಲೆಗಳನ್ನೂ ಅನೇಕ ಮರಶಿಲೆಗಳನ್ನೂ (ಪೆಟ್ರಿಫೈಡ್‍ವುಡ್) ಈ ಪದರಗಳಲ್ಲಿ ಕಾಣಬಹುದು. 

ಮೇಲಣ ಕೋಟಾ ಹಂತ ಸು. 700 ಮೀಗಳಷ್ಟು ದಪ್ಪ ಇದೆ. ಇದು ಆಂಧ್ರ ಪ್ರದೇಶದ ಕೋಟಾ ಸಮೀಪದಲ್ಲಿ ಚೆನ್ನಾಗಿ ವ್ಯಕ್ತವಾಗಿವೆ. ಈ ವಿಭಾಗದಲ್ಲೂ ಅನೇಕ ಸಸ್ಯಾವಶೇಷಗಳೂ ಇತರ ಜೀವ್ಯಾವಶೇಷಗಳೂ ಕಂಡುಬಂದಿವೆ. ರಾಜ್‍ಮಹಲ್ ಶಿಲಾಶ್ರೇಣಿಯು ಭೂಕಾಲ ಸೂಚಿಯ ಜುರಾಸಿಕ್ ಯುಗಕ್ಕೆ  ಸೇರಿದ್ದದೆಂದು ಸಸ್ಯಾವಶೇಷಗಳ ಆಧಾರದ ಮೇಲೆ ನಿರ್ಧರಿಸಲಾಗಿದೆ. 									 
  (ಎಂ.ವಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ